ಬಂದರು ಮತ್ತು ರೇವು -
	ಹಡಗುಗಳು ತೇಲುವುದಕ್ಕೆ ಸಾಕಷ್ಟು ಆಳವಾದ ನೀರಿದ್ದು ಸಮುದ್ರಯಾನಕ್ಕೆ ತಡೆಗಳಿಲ್ಲದೆ ಗಾಳಿ ಮತ್ತು ಅಲೆಗಳಿಂದ ರಕ್ಷಿತವಾಗಿ ಹಡಗುಗಳು ತಂಗಬಹುದಾದ ತೀರಪ್ರದೇಶ ಬಂದರು (ಹಾರ್ಬರ್), ಈ ಎಲ್ಲ ಅನುಕೂಲತೆಗಳ ಜೊತೆಗೆ ಹಡಗುಗಳಿಗೆ ಸಾಮಾನನ್ನು ಹೇರುವುದಕ್ಕೂ ಅಲ್ಲಿಂದ ಇಳಿಸುವುದಕ್ಕೂ ಅನೇಕ ವ್ಯಾಪಾರಿಗಳು ಒಂದೇ ಕಾಲದಲ್ಲಿ ಉಪಯೋಗಿಸುವ ಹಾಗೆ ಸೌಕರ್ಯಗಳಿರುವ ಸ್ಥಳ ರೇವು (ಪೋರ್ಟ್) ಉಗಿ ತಿರುಬಾನಿಯ ವ್ಯಾಪಕ ಅನ್ವಯದಿಂದ ಸಮುದ್ರಯಾನ ಕಳೆದ ಶತಮಾನದ ಕೊನೆಯ ಭಾಗದಲ್ಲಿ ಪ್ರಪಂಚ ವ್ಯಾಪಿಯಾದ ಬಳಿಕ ಎಲ್ಲ ಬಂದರುಗಳೂ ರೇವುಗಳಾಗಿವೆ. ಜಲಯಾನ ಯೋಗ್ಯವಾದ ನದೀಮುಖಗಳಲ್ಲಿಯೋ ಸಮುದ್ರದ ಮರೆಯಾದ ಶಾಖೆಗಳಲ್ಲಿಯೋ ಸಾಮಾನ್ಯವಾಗಿ ರೇವುಗಳನ್ನು ಕಟ್ಟುವುದು ವಾಡಿಕೆ.

	ರೇವುಗಳ ವ್ಯವಸ್ಥೆಯನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಒಂದು ಹಡಗುಗಳು ನಿಲ್ಲುವ ಭಾಗ, ಇನ್ನೊಂದು ಹಡಗಿನ ಸರಕುಗಳ ವಿಲೆವಾರಿಯ ಭಾಗ, ಹಡಗು ರೇವಿಗೆ ಬಂದ ಕೂಡಲೆ ಆರೋಗ್ಯಶಾಖೆಯ ವೈದ್ಯರು ಬಂದು ಸಾಂಕ್ರಾಮಿಕ ರೋಗಗಳಿಂದ ನರಳುವವರಿದ್ದರೆ ಅವರನ್ನು ಆಸ್ಪತ್ರೆಗೆ ಕಳಿಸುತ್ತಾರೆ. ಸರಕಿನ ಇಲ್ಲವೆ ಜನರ ಸಾಗಣೆಯ ನಿಯಮಗಳನ್ನು ತಿಳಿಸುತ್ತಾರೆ. ರೇವಿನ ಸಂಸ್ಥೆಯೇ ಅಲ್ಲದೆ ಖಾಸಗಿ ಸಂಸ್ಥೆಗಳೂ ಹಡಗನ್ನು ಸರಪಳಿಗಳಿಂದ ಬೇಕಾದ ಕಡೆಗೆ ಎಳೆಯುತ್ತವೆ. ಜಗ್ಗುದೋಣಿಗಳು (ಟಗ್ಸ್) ದೊಡ್ಡ ಹಡಗುಗಳನ್ನು ಹಡಗು ಕಟ್ಟೆಗಳ (ಡಾಕ್ಸ್) ಒಳಕ್ಕೂ ಹೊರಕ್ಕೂ ಎಳೆಯುತ್ತವೆ.

	ಹಡಗು ಸಾಮಾನನ್ನು ಮಾತ್ರ ಸಾಗಿಸುತ್ತಿದ್ದರೆ ಅದನ್ನು ಇಳಿಸುವುದಕ್ಕೂ ಸಾಗಿಸುವುದಕ್ಕೂ ಅನುಕೂಲವಾಗುವಂತೆ ಇಳಿದಾಣದ (ಕ್ವೇ) ಪಕ್ಕದಲ್ಲಿ ನಿಲ್ಲಿಸಿ ಸಾಮಾನನ್ನು ಬೇರೆಯ ದೋಣಿಗಳಿಗೆ ಎತ್ತಿ ಹಾಕುತ್ತಾರೆ. ಕೆಲವು ಬಂದರುಗಳಲ್ಲಿ ಭರತದ ಉಬ್ಬರವಿಳಿತಗಳ ಕಾಲದಲ್ಲಿ ಸಮುದ್ರಮಟ್ಟ ಬಹಳ ವ್ಯತ್ಯಾಸವಾಗುವುದರಿಂದ ಹಡಗುಕಟ್ಟೆಗಳಿಗೆ ಪ್ರಾಕಾರಗಳನ್ನು ಕಟ್ಟಿ ಒಳಗಿನಿಂದ ಬೇಕಾದಾಗ ಪಂಪುಗಳಿಂದ ನೀರನ್ನು ಎತ್ತಿ ಒಂದೇ ಮಟ್ಟಕ್ಕೆ ನಿಲ್ಲಿಸುತ್ತಾರೆ.

	ಎಲ್ಲ ರೇವುಗಳಲ್ಲಿಯೂ ನೀರಿಲ್ಲದ ಹಡಗುಕಟ್ಟೆಗಳಲ್ಲಿ ಹಡಗಿನ ರಿಪೇರಿಯನ್ನೂ ಸುಸ್ಥಿತಿಯನ್ನೂ (ಮೇಂಟೆನೆನ್ಸ್) ನೋಡಿಕೊಳ್ಳುತ್ತಾರೆ. ನೀರಿನ ಕೆಳಗಡೆ ಸಾಮಾನ್ಯವಾಗಿ ಇರುವ ಭಾಗಗಳನ್ನು ಒಣಕಟ್ಟೆಗಳಲ್ಲಿ ಎಂಜಿನಿಯರುಗಳು ಪರೀಕ್ಷಿಸುತ್ತಾರೆ. ಅವಶ್ಯವಾದ ಕಡೆ ಬಣ್ಣವನ್ನು ಹಚ್ಚಲಾಗುತ್ತದೆ. ಹಡಗುಗಳಿಗೆಲ್ಲ ಸಿಹಿನೀರು ಎಣ್ಣೆ, ಕಲ್ಲಿದ್ದಲು, ಪೆಟ್ರೋಲ್ ಇವನ್ನು ಒದಗಿಸುವ ವ್ಯವಸ್ಥೆ ಉಂಟು.

	ರೇವಿಗೆ ಸಾಮಾನನ್ನು ಒಳನಾಡಿನಿಂದ ರಫ್ತು ಮಾಡುವ ಇಲ್ಲವೆ ಆಮದು ಮಾಡುವ ಜನರು ಬರಲು ಯಾವಾಗಲೂ ಅವಕಾಶವಿರುವ ಹಾಗೆ ರೇಲ್ವೆ ಮತ್ತು ರಸ್ತೆಯ ಸೌಕರ್ಯಗಳಿರಬೇಕು. ರೇಲ್ವೆ ಎಂಜಿನ್ನುಗಳು, ಮೋಟರುಗಳು ಮೊದಲಾದ ಯಂತ್ರಗಳನ್ನು ಎತ್ತಿ ಇಳಿಸುವುದಕ್ಕೆ 150ರಿಂದ 200 ಟನ್ ತೂಕ ಹೊರಬಲ್ಲ ಕ್ರೇನುಗಳು ದೊಡ್ಡ ರೇವುಗಳಲ್ಲಿರುತ್ತವೆ. ಉಕ್ಕಿನ ಕಂಬಗಳ ಮೇಲೆ ಇರುವ ಕಪ್ಪಿಗಳ ಮೂಲಕ ಕೊನೆಯಿರದ ಬೆಲ್ಟ್ ಇಲ್ಲವೆ ಉಕ್ಕಿನ ಹಗ್ಗದ ಮೇಲೆ ಸಾಮಾನನ್ನು ಸಾಗಿಸುವ ಸಾಗುಪಟ್ಟಿಗಳು, ಸಣ್ಣ ಕ್ರೇನುಗಳು, ಕಪ್ಪಿಗಳ ಮೇಲೆ ಸಾಮಾನನ್ನು ಎತ್ತುವ ಹಾಯಿಸ್ಟುಗಳು ವಿಶೇಷವಾಗಿ ಬೇಕಾಗುತ್ತವೆ. ಆಳುಗಳಂತೂ ಯಾವಾಗಲೂ ಸಿದ್ಧರಾಗಿರಬೇಕು.

	ರೇವಿನ ಆಡಳಿತ: ಭಾರತದಲ್ಲಿ ರೇವುಗಳ ಆಡಳಿತವನ್ನು ಆಯಾ ಪೋರ್ಟ್ ಟ್ರಸ್ಟುಗಳು ಶಾಸನದತ್ತವಾದ ಅಧಿಕಾರವನ್ನು ಪಡೆದು ನೋಡಿಕೊಳ್ಳುತ್ತವೆ. ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ವಾಷಿಂಗ್ಟನ್ನಿನಲ್ಲಿ ರೇವಿನ ಜಿಲ್ಲೆಗಳನ್ನು ಸ್ಥಾಪಿಸಿ ಚುನಾಯಿತರಾದ ಕಮಿಷನರುಗಳು ಅಲ್ಲಿಯ ಕೆಲಸಗಳನ್ನು ನೋಡಿಕೊಳ್ಳುತ್ತಾರೆ. ನ್ಯೂಯಾರ್ಕಿನ ಬಂದರು ನ್ಯೂಯಾರ್ಕ ಮತ್ತು ನ್ಯೂಜೆರ್ಸಿ ಸಂಸ್ಥಾನಗಳ ಗಡಿಯಲ್ಲಿವೆ. 1834ರಲ್ಲಿ ಎರಡು ಸಂಸ್ಥಾನಗಳೂ ರೇವಿನ ವಿಚಾರದಲ್ಲಿ ಒಂದು ಕೌಲನ್ನು ಮಾಡಿಕೊಂಡವು. 1921ರಲ್ಲಿ ಅಧಿಕಾರವೆಲ್ಲ ಒಂದು ರೇವಿನ ಆಡಳಿತಕ್ಕೆ ಸೇರಿತು. ಕ್ಯಾಲಿಫೋರ್ನಿಯದ ಸ್ಯಾನ್‍ಫ್ರಾನ್‍ಸಿಸ್ಕೊ ರೇವಿನ ಎಲ್ಲ ಅನುಕೂಲತೆಗಳ ಯಾಜಮಾನ್ಯವೂ ಆ ಸಂಸ್ಥಾನಕ್ಕೆ ಸೇರಿದೆ. ಬಂದರಿನ ಕಮಿಷನರುಗಳು ಎಲ್ಲ ಕೆಲಸಗಳನ್ನೂ ನಿರ್ವಹಿಸುತ್ತಾರೆ.

	ಬಂದರುಗಳ ಬೆಳವಣಿಗೆ: ವಾಣಿಜ್ಯವೂ ನೌಕಾಯುದ್ಧವೂ ಪ್ರಾರಂಭವಾದ ನಾಗರಿಕತೆಯ ಮೊದಲ ಮಜಲಿನಲ್ಲಿಯೇ ಬಂದರುಗಳ ಆವಶ್ಯಕತೆ ಕಾಣಿಸಿಕೊಂಡಿತು. ಈಜಿಪ್ಟಿನ ಮೆಂಫಿಸ್ ಮತ್ತು ಥೀಬ್ಸ್ ನಗರದಲ್ಲಿಯೂ ಸುಮೆರಿಯದ ಪ್ರಾಚೀನ ಉರ್ ನಗರದಲ್ಲಿಯೂ ಬಂದರುಗಳಿದ್ದುವು. ಸಮುದ್ರಯಾನದಲ್ಲಿ ನಿಸ್ಸೀಮರಾದ ಫೀನಿಸಿಯನರು ಕ್ರಿ ಪೂ. 13ನೆಯ ಶತಮಾನದಲ್ಲಿ ಪೈರ್ ನಗರದಲ್ಲಿ ಎರಡು ಬಂದರುಗಳನ್ನು ಕಟ್ಟಿದ್ದರು. ಸಿಡನ್ನಿನಲ್ಲಿಯೂ ಇಷ್ಟು ವಿಸ್ತಾರವಲ್ಲದ ಇನ್ನೆರಡು ಬಂದರುಗಳು ನಿರ್ಮಾಣವಾಗಿದ್ದುವು. ಅವರು ಬಿಡಿಬಿಡಿಯಾದ ಕಲ್ಲುಗಳನ್ನು ರಾಶಿಹಾಕಿ ಅಲೆತಡೆಗಳನ್ನು ಮಾಡುತ್ತಿದ್ದರು. ಕಾರ್ಥೇಜಿನ ಬಂದರಿನಲ್ಲಿ ಎರಡು ವಿಭಾಗಗಳಿದ್ದುವು. ನಡುವೆ 21 ಮೀ ಅಗಲದ ನಾಲೆಯಿತ್ತು. ಒಳಗಣ ಬಂದರಿನಲ್ಲಿ 20 ಯುದ್ಧದ ಹಡಗುಗಳಿಗೆ ಜಾಗವಿತ್ತು. ಗ್ರೀಸಿನ ಬಂದರುಗಳ ಸುತ್ತ ನೆಲವಿದ್ದು ಹೆಚ್ಚಿನ ಯಂತ್ರ ಶಿಲ್ಪದ ಕೆಲಸಗಳಿಗೆ ಆವಶ್ಯಕತೆಯಿರಲಿಲ್ಲ. ಯುದ್ಧದ ಅನುಕೂಲತೆಗಾಗಿ ಚಿಲ್ಲರೆ ಕೆಲಸಗಳನ್ನು ಮಾಡಿದ್ದರು. ಕ್ರಿ.ಪೂ. 4ನೆಯ ಶತಮಾನದಲ್ಲಿ ಅಲೆಕ್ಸಾಂಡ್ರಿಯದಲ್ಲಿ ರೇವು ಆಗಿತ್ತು. ಕ್ರಿ.ಪೂ. 2ನೆಯ ಶತಮಾನದಲ್ಲಿ ಫ್ಯಾರೋಸ್ ದ್ವೀಪದಲ್ಲಿ ಪ್ರಪಂಚದಲ್ಲಿಯೇ ಮೊದಲನೆಯ ಬೆಳಕಿನ ಮನೆಯ ನಿರ್ಮಾಣವಾಯಿತು. ರೋಮನರು ತಮಗೆ ಸಹಜವಾದ ಬಂದೋಬಸ್ತಾದ ರೀತಿಯಲ್ಲಿ ಬಂದರುಗಳನ್ನು ಕಟ್ಟಿದ್ದರು. ಇಟಲಿಯ ಸಮುದ್ರ ತೀರವನ್ನು ಈಗಲೂ ನೋಡಿದರೆ ಅವರು ಎಷ್ಟು ಚೆನ್ನಾಗಿ ಬಂದರಿನ ಶಿಲ್ಪದ ತತ್ತ್ವಗಳನ್ನೂ ಆಚರಣೆಯನ್ನೂ ಅರಿತಿದ್ದರೆಂದು ತಿಳಿಯುವುದು. ಫೈಬರ್ ನದೀಮುಖದಲ್ಲಿ ಆಸ್ಟ್ರಿಯಾದ ಪುರಾತನವಾದ ರೇವು ಒಂದು ಲಕ್ಷಣವಾದ ಸಂಪೂರ್ಣ ಮಾದರಿ. ಅವರು ಕಲ್ಲಿನ ಕಂಬಗಳು ಮೇಲೆ ಕಟ್ಟಿದ ಕಮಾನುಗಳ ಮೇಲೆ ಬಂದರಿನ ಹೊರಗೋಡೆಗಳನ್ನು ಎತ್ತುತ್ತಿದ್ದರು. ಇದರಿಂದ ಅಲೆಗಳು ಸರಾಗವಾಗಿ ಕಮಾನುಗಳ ಕೆಳಗೆ ನುಗ್ಗಿ ಬಂದರಿನಲ್ಲಿ ಮರಳು ನಿಲ್ಲುವ ಅವಕಾಶ ತಪ್ಪುತ್ತಿತ್ತು. ಆದರೆ ಬಂದರಿನ ಒಳಗಡೆ ನೀರು ಸ್ತಬ್ದವಾಗಿರುತ್ತಿರಲಿಲ್ಲ. ಭೂಮಧ್ಯ ಸಮುದ್ರದಲ್ಲಿ ಭರತದ ಉಬ್ಬರವಿಳಿತಗಳಿರಲಿಲ್ಲ. ಸುತ್ತಲೂ ಭೂಭಾಗವಿತ್ತು. ಅವರಿಗೆ ಹೆಚ್ಚಿನ ಸಮಸ್ಯೆಗಳಿರಲಿಲ್ಲ. ರೋಮನ್ ನಾಗರಿಕತೆ ಮುರಿದು ಬದ್ದ ಮೇಲೆ ಮಧ್ಯ ಯುಗದಲ್ಲಿ ವೆನಿಸ್ ಮತ್ತು ಜಿನೋವ ಪಟ್ಟಣಗಳಲ್ಲಿ ರೇವುಗಳನ್ನು ಕಟ್ಟುವ ತನಕವೂ ಈ ಕಲೆಯ ಪುನರಜ್ಜೀವನವಾಗಲಿಲ್ಲ. 17ನೆಯ ಶತಮಾನದಲ್ಲಿ ಪ್ರಾನ್ಸಿನಲ್ಲಿ ಲೆಹ್ಯಾಪ್ರಿ, ಡೀವ್ಸ್ ಮತ್ತು ಡನ್‍ಕರ್ಕಿನಲ್ಲಿ ರೇವುಗಳು ನಿರ್ಮಾಣವಾದವು. ಲಂಡನ್ನಿನಲ್ಲಿ ಹಡಗು ಕಟ್ಟೆಗಳು ತಯಾರಾದುವು. 19ನೆಯ ಶತಮಾನದಲ್ಲಿ ವಿಕ್ಟೋರಿಯ ಹಡಗುಕಟ್ಟೆಗಳನ್ನು ಕಟ್ಟಿದರು. ಆವಿಯ ಜಹಜು ಬಂದ ಮೇಲೆ ಲಿವರ್‍ಪೂಲ್ ಬಂದರು ಬೆಳೆಯಿತು. ಮ್ಯಾಂಚೆಸ್ಟರ್ ನಾಲೆಯನ್ನು ತೋಡಿದ ಮೇಲೆ ಆ ನಗರದಲ್ಲಿ ರೇವನ್ನು ನಿರ್ಮಿಸಿದರು. ಹಾಲೆಂಡಿನಲ್ಲಿ ಆ್ಯಮ್‍ಸ್ಟರ್ ಡ್ಯಾಮ್ 17ನೆಯ ಶತಮಾದಲ್ಲಿಯೇ ದೊಡ್ಡ ರೇವು ಆಗಿತ್ತು. ಜರ್ಮನಿಯಲ್ಲಿ ಎಲ್ಬ್ ನದಿಯ ಪಾತ್ರವನ್ನು ತೋಡಿದ ಮೇಲೆ ಸಮುದ್ರದಿಂದ 120 ಕಿಮೀ ದೂರದ ಹ್ಯಾಂಬರ್ಗ್ ಮುಖ್ಯವಾದ ರೇವು ಆಯಿತು.

	ಬಂದರಿನ ವಿನ್ಯಾಸ: ಒಂದು ಬಂದರನ್ನು ಕಟ್ಟುವಾಗ ಆ ಸಮುದ್ರ ತೀರ ಎಷ್ಟರ ಮಟ್ಟಿಗೆ ಹೊರಗಡೆಗೆ ತೆರೆದಿದೆ. ಗಾಳಿಯ ರಭಸ ಮತ್ತು ದಿಕ್ಕು, ಚಂಡಮಾರುತಗಳ ಸಂಖ್ಯೆ, ಅಲೆಗಳ ಎತ್ತರ ಮತ್ತು ರಭಸ, ಭರತದ ಬಲ ಮತ್ತು ವ್ಯಾಪ್ತಿ, ಭರತದ ಏರಿಳಿತಗಳಿಗೆ ನಡುವೆ ಇರುವ ಅಂತರ ಮುಂತಾದ ವಿಚಾರಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಸಮುದ್ರದ ಆಳ ಮತ್ತು ತಳದ ಇಳಿಜಾರನ್ನು ನೋಡಿ ತಳದಲ್ಲಿ ಕೊರೆದು ನೆಲವನ್ನು ಪರೀಕ್ಷಿಸಬೇಕು. ಬಂದರಿಗೆ ರಕ್ಷಣೆಯನ್ನು ಒದಗಿಸತಕ್ಕ ದ್ವೀಪಗಳು ಮತ್ತು ಮರುಳಿನ ದಿಣ್ಣೆಗಳು ಹೊಸದಾಗಿ ಕಟ್ಟಬೇಕಾದ ಕಟ್ಟಡಗಳ ಸ್ವರೂಪವನ್ನು ಗೊತ್ತು ಮಾಡುತ್ತವೆ. ನದಿಗಳು ಸಮುದ್ರಕ್ಕೆ ಸೇರುವ ಕಡೆಗಳಲ್ಲಿಯೂ ಅಳಿವೆಗಳಲ್ಲಿಯೂ ಬಂದರುಗಳನ್ನು ಕಟ್ಟಬೇಕಾದಾಗ ಹೊಳೆಯಲ್ಲಿ ಹರಿಯುವ ನೀರಿನ ಅಳತೆಯಷ್ಟು, ನದಿಯ ಪಾತ್ರದಲ್ಲಿ ಗೋಡು ತುಂಬುತ್ತದೆಯೆ ಎಂದು ವಿಚಾರಿಸಬೇಕಾಗುತ್ತದೆ.

	ಬಂದರಿನ ಮುಖ್ಯ ಉದ್ದೇಶ ಗೊತ್ತಾದ ಒಂದು ಜಾಗವನ್ನು ಅಲೆಗಳ ಹೊಡೆತದಿಂದ ರಕ್ಷಿಸುವುದು. ಅಲೆಗಳು ಸಂಚರಿಸುವ ದೂರ, ಗಾಳಿಯ ಬಲ ಮತ್ತು ಬೀಸುವ ಅವಧಿಗೆ ಅನುಸಾರವಾಗಿ ಅಲೆಗಳ ಎತ್ತರವಿರುತ್ತದೆ. ಆಳವಾದ ನೀರಿನ ಮೇಲೆ ಸಾಕಷ್ಟು ಕಾಲ ಬೀಸಿದರೆ 40 ನಾಟುಗಳ ವೇಗದ ಮಾರುತ 16ಕಿಮೀ ದೂರ ಸಂಚರಿಸಿದಾಗ 2.1 ಮೀ ಎತ್ತರದ ಅಲೆಯನ್ನೂ 160 ಕಿಮೀ ದೂರ ಹೋದಾಗ 5.8 ಮೀ ಎತ್ತರದ ಅಲೆಯನ್ನೂ 1600 ಕಿಮೀ ದೂರ ಹೋದಾಗ 11ಮೀ ಎತ್ತರದ ಅಲೆಯನ್ನೂ ಉತ್ಪತ್ತಿ ಮಾಡುತ್ತದೆ. 40 ನಾಟುಗಳೆಂದರೆ ಗಂಟೆಗೆ ಸುಮಾರು 74ಕಿಮೀ ವೇಗ. ಬಂದರಿನೊಳಕ್ಕೆ ನುಗ್ಗುವ ಅಲೆಗಳ ಎತ್ತರವನ್ನು ಬಂದರಿನ ಅಗಲವನ್ನು ಹೆಚ್ಚಿಸುವುದರಿಂದ ಇಲ್ಲವೆ ಕಲ್ಲಿನ ತಗ್ಗುಗೋಡೆಗಳಿಂದ ಅಲೆಗಳನ್ನು ತಡೆಯುವುದರಿಂದ ತಗ್ಗಿಸಬಹುದು.

	ಒಂದೇ ಸಮುದ್ರತೀರದಲ್ಲಿಯೇ ಬೇರೆ ಬೇರೆ ಕಡೆಗಳಲ್ಲಿ ಅಲೆಗಳ ಎತ್ತರದಲ್ಲಿ ವ್ಯತ್ಯಾಸಗಳಿರುತ್ತವೆ. ಕೆಲವು ಕಡೆಗಳಲ್ಲಿ ಅಲೆಗಳ ಹೊಡೆತಕ್ಕೆ ದಡ ಪೂರ್ತಿಯಾಗಿ ಸಿಕ್ಕಿರುತ್ತದೆ. ಇನ್ನು ಕೆಲವು ಕಡೆ ದ್ವೀಪಗಳೂ ದಿಣ್ಣೆಗಳೂ ದಡವನ್ನು ರಕ್ಷಿಸುತ್ತವೆ. ಹಾಗೆಯೇ ಸಮುದ್ರದ ಚಾಚುಗಳು, ನದೀ ಮುಖಗಳು, ಅಳಿವೆಗಳು ಮತ್ತು ಲ್ಯಾಗೂನುಗಳು ಬಂದರಿನ ಜಾಗವನ್ನು ಅಲೆಗಳಿಂದಲೂ ಗಾಳಿಯಿಂದಲೂ ಕಾಪಾಡುತ್ತವೆ. ನದಿಗಳು ಹೊತ್ತು ತರುವ ಗೋಡುಮಣ್ಣು ಸಮದ್ರದ ಅಡ್ಡ ಕ್ರಮೇಣ ಒಡ್ಡು ಕಟ್ಟಿದಂತೆ ಬೆಳೆದು ಕಡಲಿನ ಆಳವನ್ನು ಕರಾವಳಿಯ ತಗ್ಗಿನಿಂದ ಬೇರ್ಪಡಿಸುತ್ತದೆ. ಈ ತಗ್ಗು ನೆಲದಲ್ಲಿ ಏರ್ಪಡುವ ಸರೋವರಕ್ಕೆ ಲ್ಯಾಗೂನ್ ಎಂದು ಹೆಸರು. ಈ ಸೌಕರ್ಯ ಇಲ್ಲದ ಕರಾವಳಿಯಲ್ಲಿ ಕೃತಕವಾದ ಅಲೆತಡೆಗಳನ್ನು ಕಟ್ಟಬೇಕಾಗುತ್ತದೆ. ಅಲೆಗಳು ಬಂದರಿನ ಮೇಲೆ ಅನೇಕ ವಿಧಗಳಲ್ಲಿ ತಮ್ಮ ಬಲವನ್ನು ಪ್ರದರ್ಶಿಸಬಹುದು: 1 ನೇರವಾಗಿ ಬಿದ್ದು ಭಾರವನ್ನು ಹೇರಬಹುದು. 2 ಮುಂದಕ್ಕೆ ಚಾಚಿರುವ ದಡವನ್ನು ಕೆಳಗಿನಿಂದ ಮೇಲಕ್ಕೆ ಎತ್ತಬಹುದು. 3 ಅಲೆ ಹಿಂದಕ್ಕೆ ಸರಿಯುವಾಗ ತಳಪಾಯವನ್ನು ಕೆಳಕ್ಕೆ ತಳ್ಳಬಹುದು. 4 ಕಲ್ಲುಗಾರೆಯ ಸಂದುಗಳಲ್ಲಿ ಗಾಳಿ ಸಿಕ್ಕಿ ಅದುಮಿದಾಗ ಅಲೆ ಮೇಲಕ್ಕೆ ಏರುವಾಗ ಒತ್ತಡದಿಂದ ಕಲ್ಲುಗಾರೆಯನ್ನು ಸೀಳಬಹುದು. 5 ಅಲೆಗಳು ಅಡ್ಡಗೋಡೆಗಳ ಮೇಲೆ ಹಾಯ್ದು ಒಳಕ್ಕೆ ಬಂದಾಗ ರಸ್ತೆ ಇಲ್ಲವೆ ಕಟ್ಟಡಗಳನ್ನು ಕೆಳಕ್ಕೆ ತಳ್ಳಬಹುದು. ವಾಯುಗುಣ ಕ್ಷೋಭೆಗೆ ಒಳಗಾಗಿದ್ದಾಗ ಈ ಎಲ್ಲ ಶಕ್ತಿಗಳೂ ಸೇರಿ ಕಟ್ಟಡದ ಕಲ್ಲುಗಳನ್ನು ಕಳಚಬಹುದು. ಇತರ ವಿಧವಾದ ಹಾನಿಯನ್ನು ಮಾಡಬಹುದು.

	ನೈಸರ್ಗಿಕವಾದ ರಕ್ಷಣೆಯಿಲ್ಲದೆ ಇರುವ ಜಾಗದಲ್ಲಿ ಬಂದರನ್ನು ಸಂವಿಧಾನ ಮಾಡುವಾಗ ಕೆಲವು ವಿಷಯಗಳನ್ನು ಪರಿಶೀಲಿಸಬೇಕಾಗುತ್ತದೆ. 1 ಸಮುದ್ರದ ಕಡೆಯಿಂದ ಬಂದರಿನೊಳಕ್ಕೆ ಹಡಗುಗಳು ಬರುವ ದಾರಿಯಲ್ಲಿ ನೀರಿನ ಕೆಳಗೆ ಬಂಡೆ ದಿಣ್ಣೆ ಮೊದಲಾದ ಅಡಚಣೆಗಳಿರಬಾರದು. 2 ಅಲೆತಡೆ ಮುಂದುಗಡೆ ಅಲೆಗಳು ತಿರುಗದ ಹಾಗೆ ದಿಕ್ಕನ್ನು ಗೊತ್ತುಮಾಡಬೇಕು. 3 ಪ್ರವೇಶಮಾರ್ಗಕ್ಕೆ ಅಡ್ಡವಾಗಿ ಪ್ರಬಲವಾದ ಸಮುದ್ರದ ಪ್ರವಾಹಗಳು ಹರಿಯದ ಹಾಗಿರಬೇಕು. 4 ಬಂದರಿನ ಪ್ರವೇಶ ತೆರೆದಿದ್ದರೆ ಒಳಗೆ ಬರಬಹುದಾದ ಅಲೆಗಳು ದಡಗಳ ಮೇಕೋ ಕೃತಕವಾದ ತಡೆಗಳ ಮೇಲೋ ಒಡೆಯುವ ಹಾಗಿರಬೇಕು. 5 ಪ್ರವೇಶ ಆದರೂ ಸಾಧ್ಯವಾದಷ್ಟು ಕಿರಿದಾಗಿರಬೇಕು. ಏಕೆಂದರೆ ಈ ಅಗಲಕ್ಕೂ ಬಂದರಿನ ಒಳ ಅಗಲ ಮತ್ತು ವಿಸ್ತೀರ್ಣಕ್ಕೂ ಇರುವ ಸಂಬಂಧದ ಮೇಲೆ ಅಲೆಗಳ ಏರಿಳಿತಗಳು ಹೆಚ್ಚು ಅಥವಾ ಕಡಿಮೆ ಆಗುತ್ತವೆ. 6 ಪ್ರವೇಶಮಾರ್ಗದಲ್ಲಿ ಸಾಧ್ಯವಾದರೆ ಒಂದು ಅಲೆತಡೆ, ಇನ್ನೊಂದರ ಮುಂದೆ ಚಾಚಿದ್ದರೆ ಒಳ್ಳೆಯದು. 

	ಬಂದರುಗಳು ನೈಸರ್ಗಿಕವಾಗಿರಬಹುದು: ನೈಸರ್ಗಿಕ ಸನ್ನಿವೇಶದಲ್ಲಿ ಯಂತ್ರ ಶಿಲ್ಪದ ಸಹಾಯ ದೊರಕಿರಬಹುದು. ಇಲ್ಲವೆ ಮನುಷ್ಯನಿರ್ಮಿತವಾಗಿರಬಹುದು. ಅವನ್ನು ಈ ಮುಂದಿನಂತೆ ವರ್ಗೀಕರಿಸಬಹುದು.

	1 ನೈಸರ್ಗಿಕ ಬಂದರುಗಳು :ಇವು ನೆಲದಿಂದ ಸುತ್ತುಗಟ್ಟಿರಬಹುದು ಇಲ್ಲವೆ ದ್ವೀಪಗಳಿಂದ ರಕ್ಷಿತವಾಗಿರಬಹುದು. ಹೀಗೆ ಗಾಳಿಯ ಮರೆಯಲ್ಲಿರುವ ನೀರು ಹಡಗುಗಳು ನಿಲ್ಲುವುದಕ್ಕೆ ಅನುಕೂಲವಾಗಿರುತ್ತದೆ. ಆದರೆ ಸುತ್ತ ನೆಲವಿದ್ದು ಕಿರಿದಾದ ನಾಲೆಗಳು ಸಮುದ್ರಕ್ಕೆ ಸಂಬಂಧವನ್ನು ಕಲ್ಪಿಸಿರುವ ಸಮುದ್ರದ ಕೋಚುಗಳನ್ನು ನೈಸರ್ಗಿಕ ಬಂದರುಗಳೆಂದು ಕರೆಯುತ್ತಾರೆ. ಇಂಥ ಕಡೆ ಹಡಗುಗಳ ಪ್ರವೇಶಮಾರ್ಗದಲ್ಲಿಯೂ ಲಂಗರು ಹಾಕಿ ನಿಲ್ಲುವ ಕಡೆಗಳಲ್ಲಿಯೂ ಸಮುದ್ರದ ಮೇಲಿನ ವಾಣಿಜ್ಯಮಾರ್ಗಗಳಲ್ಲಿ ನೀರಿನ ಆಳ ಸಾಕಷ್ಟಿದ್ದರೆ ತುಂಬ ಅನುಕೂಲವಾಗುತ್ತದೆ. ಕ್ಯಾಲಿಫೋರ್ನಿಯದ ಸಾನ್‍ಫ್ರಾನ್ಸಿಸ್ಕೋ ಬಂದರು ಇಂಥ ಸನ್ನಿವೇಶದಲ್ಲಿದೆ. ಇದರ ಕೊಲ್ಲಿ 89ಕಿಮೀ ಉದ್ದವಾಗಿದೆ. ನೀರಿನ ವಿಸ್ತಾರ 104 ಚದರ ಕಿಮೀಗಳು. ಇಲ್ಲಿ ಸಮುದ್ರತೀರದ ಉದ್ದ 322 ಕಿಮೀ. ಕೊಲ್ಲಿಯೊಳಕ್ಕೆ ಸ್ಯಾಕ್ರ ಮೆಂಟೊ ಮತ್ತು ಸ್ಯಾನ್‍ಜೋಕ್ವಿನ್ ನದಿಗಳು ಬೀಳುತ್ತವೆ. ಇದರ ಗೋಲ್ಡನ್ ಗೋವ್ ಪ್ರವೇಶಮಾರ್ಗ 1.6 ಮೀ ಅಗಲ. ಗರಿಷ್ಠ ಆಳ 110 ಕಿಮೀ. ಇಲ್ಲಿ ಪ್ರಪಂಚದ ಸೇತುವೆಗಳ ಕಣ್ಣಿನ ಅಗಲದಲ್ಲಿ ಎರಡನೆಯದಾದ 1280 ಮೀ ಕಣ್ಣಿನ ಗೋಲ್ಡನ್ ಗೇಟ್ ತೂಗುಸೇತುವೆಯನ್ನು ಕಟ್ಟಿದ್ದಾರೆ.

	ಹಡ್ಸನ್ ನದಿಯ ಮುಖದಲ್ಲಿರುವ ನ್ಯೂಯಾರ್ಕಿನ ಬಂದರಿನ ಜಾಗವೂ ಹೀಗೆಯೇ ಇದೆ. ಇಲ್ಲಿ ಸಮುದ್ರತೀರ ಕೋಚುಕೋಚಾಗಿದ್ದು ಒಟ್ಟು 772 ಕಿಮೀ ಉದ್ದವಾಗಿದೆ. ನೀರಿನ ವಿಸ್ತಾರವೂ ಆಳವೂ ಹೆಚ್ಚು. ಭರತದ ಏರಿಳಿತಗಳ ಅಂತರ 1.5 ಮೀ. ಹಡಗುಗಳು ಒಳಕ್ಕೆ ಬರುವುದಕ್ಕೆ ತುಂಬ ಅನುಕೂಲವಾಗಿದೆ. ಈ ಬಂದರಿನಲ್ಲಿ ಎರಡು ಭಾಗಗಳಿವೆ. ಹೊರಗಿನ ಬಂದರಿಗೆ ಒಂದು ಕಡೆ ನ್ಯೂಜೆರ್ಸಿ ಸಮುದ್ರತೀರವೂ ಇನ್ನೊಂದು ಕಡೆ ಲಾಂಗ್ ದ್ವೀಪವೂ ರಕ್ಷಣೆ ಒದಗಿಸುತ್ತವೆ. ಇದರ ಪ್ರವೇಶ ಮಾರ್ಗ ಅಟ್ಲಾಂಟಿಕ್ ಸಾಗರಕ್ಕೆ ತೆರೆದಿದೆ. ಒಳಗಿನ ಬಂದರಿಗೆ ಪಶ್ಚಿಮಕ್ಕೆ ಸ್ವೇಟನ್ ದ್ವೀಪಕ್ಕೂ ಪೂರ್ವಕ್ಕೂ ಬ್ರೂಕ್‍ಲಿನ್ನಿಗೂ ನಡುವೆ ಇರುವ ನ್ಯಾರೋಸ್ ಎಂಬ ನಾಲೆಯ ಮೂಲಕ ಪ್ರವೇಶ. ಈಚೆಗೆ ಈ ಬಂದರನ್ನು ಉಪಯೋಗಿಸುವ ಹಡಗುಗಳ ಅಳತೆ ಹೆಚ್ಚಿದ ಮೇಲೆ ಹೂಳು ಎತ್ತಿ ಸಮುದ್ರದ ನಾಲೆಗಳನ್ನು ಆಳವಾಗಿ ಮಾಡಿದ್ದಾರೆ. ಇಲ್ಲಿ ಗೋಲ್ಡನ್ ಗೇಟ್ ಸೇತುವೆಗಿಂತಲೂ ಅಗಲವಾದ 1408 ಮೀ ಕಣ್ಣಿನ ನ್ಯಾರೋಸ್ ತೂಗುಸೇತುವೆ ಕಟ್ಟಿದ್ದಾರೆ.

	ಕೆನಡದ ಎರಡು ನೈಸರ್ಗಿಕ ಬಂದರುಗಳಾದ ಕ್ವಿಬೆಕ್ ಮತ್ತು ಮಾಂಟ್ರೀಲ್ ಸೇಂಟ್ ಲಾರೆನ್ಸ್ ನದಿಯ ಮುಖದಲ್ಲಿವೆ. ದಕ್ಷಿಣ ಅಮೆರಿಕದಲ್ಲಿ ಬ್ರಜûಲ್ಲಿನ ರಯೊಡಿಜೆನೀರೋ ನೈಸರ್ಗಿಕ ಬಂದರು ಅನುಕೂಲವಾದ ಜಾಗದಲ್ಲಿದೆ. ಆಸ್ಟ್ರೇಲಿಯದ ಸಿಡ್ನಿ ಬಂದರು ನೈಸರ್ಗಿಕವಾಗಿ ಸುಂದರವಾಗಿದೆ. ಇದಕ್ಕೆ ಯಾವ ಕೃತಕ ರಕ್ಷಣೆಯೂ ಬೇಕಿಲ್ಲ. ಸಮುದ್ರದಲ್ಲಿ ಹೂಳನ್ನು ಎತ್ತಬೇಕಾಗಿಲ್ಲ. ಪ್ರವೇಶ ಮಾರ್ಗವನ್ನು ಅಗಲ ಮಾಡಬೇಕಾಗಿಲ್ಲ. ಆದರೆ ಮೆಲ್‍ಬೋರ್ನ್ ಬಂದರು ಅಷ್ಟು ಅನುಕೂಲವಾಗಿಲ್ಲ.

	ಮುಂಬಯಿಯ ನೈಸರ್ಗಿಕ ಬಂದರು ಮುಂಬಯಿ ದ್ವೀಪಕ್ಕೂ ಭೂಭಾಗಕ್ಕೂ ನಡುವೆ ಇರುವ ಸುರಕ್ಷಿತವಾದ ಸಮುದ್ರದ ಶಾಖೆ. ಕಲ್ಕತ್ತ ಮತ್ತು ರಂಗೂನ್ ಈ ಎರಡು ನದಿಯ ಬಂದರುಗಳಲ್ಲಿಯೂ ಆಳ ಕಡಿಮೆಯಾದ ಸ್ಥಳಗಳಲ್ಲಿ ಮರುಳು ದಿಣ್ಣೆಗಳು ತೊಂದರೆಯನ್ನು ಕೊಡುತ್ತಲೇ ಇರುತ್ತವೆ. ಸಿಂಗಾಪುರ ಪ್ರಾಚ್ಯದೇಶಗಳಲ್ಲಿ ವ್ಯಾಪಾರ ವಿಶೇಷವಾಗಿರುವ ರೇವು. ಹತ್ತಿರದಲ್ಲಿರುವ ದ್ವೀಪಗಳಿಂದಾಗಿ ಬಂದರು ಸುರಕ್ಷಿತವಾಗಿದೆ. ನೀರಿನ ಆಳವೂ ಸಾಕಾದಷ್ಟಿದೆ. ಹೂಳು ಎತ್ತುವ ಪ್ರಮೇಯವಿಲ್ಲ. ಹಾಂಗ್‍ಕಾಂಗ್ ದ್ವೀಪ ಕ್ಯಾಂಟನ್ ನದಿಯ ಮುಖದಲ್ಲಿದೆ. ಇದಕ್ಕೂ ಸಮುದ್ರಕ್ಕೂ ನಡುವೆ ವಿಶಾಲವಾದ ಸುರಕ್ಷಿತವಾದ ನೈಸರ್ಗಿಕ ಬಂದರಿದೆ. ಜಪಾನಿನ ಮುಖ್ಯ ಬಂದರಾದ ಯಾಕೋಹಾಮ ಟೋಕಿಯೊ ಕೊಲ್ಲಿಯಲ್ಲಿದೆ. ಆದರೂ ಇಲ್ಲಿ ಆಗಾಧವಾದ ಅಲೆತಡೆಗಳನ್ನು ಕಟ್ಟಬೇಕಾಯಿತು.

	2 ಅಳಿವೆಯ ಬಂದರುಗಳು: ಕೊನೆಯ ಮಜಲಿನಲ್ಲಿ ಕೆಲವು ನದಿಗಳು ದೊಡ್ಡ ಹಡಗುಗಳನ್ನು ಸಾಗಿಸುವಷ್ಟು ಆಳವಾಗಿರುತ್ತವೆ. ಆದರೆ ಸಮುದ್ರವನ್ನು ಸೇರುವ ಕಡೆ ಮರಳಿನ ದಿಣ್ಣೆಗಳಿರುತ್ತವೆ. ಇನ್ನು ಕೆಲವು ನದಿಗಳ ಆಳಸಾಕಷ್ಟಿರುವುದಿಲ್ಲ. ಆದರೆ ಸಮುದ್ರದ ಕಡೆಯ ನಾಲೆಗಳು ಆಳವಾಗಿರುತ್ತವೆ. ಇಂಗ್ಲೆಂಡಿನ ಮರ್ಸೆ ನದಿಯಲ್ಲಿರುವ ಹಾಗೆ ಮರಳು ದಿಣ್ಣೆಗಳು ಮಾತ್ರ ಇರಬಹುದು. ಇಂಥ ಕಡೆಗಳಲ್ಲಿ ಯಂತ್ರಗಳಿಂದ ಹೂಳು ಎತ್ತಿ ಆಳ ಸಾಕಷ್ಟು ಹೆಚ್ಚಿಸಬಹುದು. ನ್ಯೂ ಯಾರ್ಕ್ ಬಂದರು ನದೀಮುಖದಲ್ಲಿದೆಯಷ್ಟೆ. ಇಲ್ಲಿ 7.3 ಮೀ ಆಳವಾದ ನೈಸರ್ಗಿಕವಾದ ಪ್ರವೇಶ ಮಾರ್ಗವೇ 1885ರ ವರೆಗೂ ಸಾಕಾಗಿತ್ತು. 1892ರ ವೇಳೆಗೆ ನಾಲೆಯಿಂದ ಹೂಳುಎತ್ತಿ ಕನಿಷ್ಠ ಆಳವನ್ನು 9.1 ಮೀಗೆ ಹೆಚ್ಚಿಸಿದರು. ಏಳು ವರ್ಷಗಳ ಮೇಲೆ ಮತ್ತೆ ಹೂಳು ಎತ್ತಿ ಕೃತಕವಾಗಿ ಇನ್ನೊಂದು ನಾಲೆ ತೋಡಿ ನಾಲೆಯನ್ನು 12.2 ಮೀ ಆಳವಾಗಿ ಮಾಡಬೇಕಾಯಿತು 1939ರಲ್ಲಿ ಎರಡು ನಾಲೆಗಳನ್ನೂ ಇನ್ನೂ 1.5 ಮೀ ಆಳವಾಗಿ ತೋಡಿದರು.

	ಲ್ಯಾಗೂನ್ ಮತ್ತು ಜೆಟ್ಟೆಯ ಬಂದರುಗಳು: ನದೀಮುಖಗಳು ಮತ್ತು ಲ್ಯಾಗೂನುಗಳಲ್ಲಿ ಜೆಟ್ಟಿಗಳನ್ನು ದಡಕ್ಕೆ ಲಂಬಕೋನದಲ್ಲಿ ಕಟ್ಟಿ ಬಂದರುಗಳನ್ನು ನಿರ್ಮಿಸುವ ಪದ್ಧತಿ ಎರಡು ಶತಮಾನಗಳಿಂದಲೂ ಬಳಕೆಯಲ್ಲಿದೆ. ಇದರಿಂದ ಪ್ರವೇಶ ಮಾರ್ಗದ ಎರಡು ದಡಗಳನ್ನೂ ಅಲೆಗಳಿಂದ ರಕ್ಷಿಸಬಹುದು. ಆಗ ಹೂಳೆ ಒಳಕ್ಕೆ ತಂದ ಮೆಕ್ಕಲು ಮಣ್ಣನ್ನು ತೆಗೆಯುವುದಕ್ಕೂ ಅನುಕೂಲವಾಗುತ್ತದೆ. ನದಿಯಲ್ಲಿ ನೀರನ್ನು ಸರಿಯಾದ ದಾರಿಯಲ್ಲಿ ಹೆಚ್ಚಿನ ವೇಗದಲ್ಲಿ ಸಾಗಿಸುವ ಕಾಮಗಾರಿಗಳನ್ನು ಮಾಡಿದರೆ ಅದರಲ್ಲಿರುವ ಮೆಕ್ಕಲುಮಣ್ಣು ಬಂದರಿನ ಬಾಯಿಗೆ ಆಚೆಗೆ ಭರತದ ಪ್ರವಾಹದಲ್ಲಿ ಸಾಗಿಹೋಗುತ್ತದೆ.

	ವಿಶಾಖಪಟ್ಟಣದ ನೈಸರ್ಗಿಕ ಬಂದರಿನಲ್ಲಿ ಒಂದು ಕಡಲ ಬಾಚುವೂ ಕಿರಿದಾದ ಪ್ರವೇಶ ಮಾರ್ಗವಿರುವ ಲ್ಯಾಗೂನಿನ ನಿಂತ ನೀರೂ ಇವೆ. ಈ ಪ್ರವೇಶ ಮಾರ್ಗದಲ್ಲಿ ಹೂಳು ತೆಗೆದು 9.1 ಮೀ ಆಳದ ನಾಲೆ ತೋಡಿ ಉತ್ತರ ದಿಕ್ಕಿನಲ್ಲಿ ಭರ್ತಿಕಲ್ಲಿನ ಜೆಟ್ಟಿ ಕಟ್ಟಿದ್ದಾರೆ. ಬಂದರಿನೊಳಕ್ಕೆ ಬರುವ ನಾಲೆಯನ್ನು ದಕ್ಷಿಣದ ಕಡೆ 305 ಮೀ ಉದ್ದದ ಭರ್ತಿಕಲ್ಲಿನ ಅಲೆತಡೆ ಕಟ್ಟಿ ಸುರಕ್ಷಿತವಾಗಿ ಮಾಡಿದ್ದಾರೆ. ಕರಾಚಿನ ನೈಸರ್ಗಿಕ ಬಂದರಿನ ಪ್ರವೇಶಮಾರ್ಗದಲಲ್ಲಿ ಜೆಟ್ಟಿಗಳನ್ನು ಕಟ್ಟಿ ಹೂಳು ತೆಗೆದು ಒಳಗಡೆ ಆಳವಾದ ನೀರಿರುವ ಹಡಗಿನ ಭರ್ತಿ ಕಟ್ಟೆಗಳನ್ನು ಕಟ್ಟಿದ್ದಾರೆ.

	ಒಂದು ಅಲೆತಡೆಯಿಂದ ರಕ್ಷಿತವಾದ ಕೊಲ್ಲಿಯ ಬಂದರುಗಳು: ಆಳವಾದ ನೀರಿರುವ ಕೊಲ್ಲಿಯಲ್ಲಿ ಬಂದರಿದ್ದರೆ ಕೃತಕ ರಕ್ಷಣೆಯ ಅವಶ್ಯಕತೆ ಹೆಚ್ಚಾಗಿರುವುದಿಲ್ಲ. ಆಳವೂ ಕಿರಿದೂ ಆದ ಕೊಲ್ಲಿಯ ಒಂದು ದಡದಿಂದ ಇನ್ನೊಂದಕ್ಕೆ ಒಂದೇ ಅಲೆತಡೆ ಕಟ್ಟಿ ಅದರಲ್ಲಿ ಹಡಗುಗಳಿಗೆ ಒಂದು ಪ್ರವೇಶಮಾರ್ಗ ಇಟ್ಟರೆ ಸಾಕಾಗುತ್ತದೆ. ಒಂದು ಕಡೆ ನೈಸರ್ಗಿಕ ರಕ್ಷಣೆಯಿದ್ದರೆ ಎದುರು ದಡದಲ್ಲಿ ಸಮುದ್ರತೀರಕ್ಕೆ ಲಂಬಕೋನವಾಗಿ ಒಂದು ಅಲೆತಡೆ ಕಟ್ಟಿ ಅದರ ಕೊನೆಯನ್ನು ಕೊಲ್ಲಿಯ ಕಡೆಗೆ ಬಾಗಿಸಬಹುದು.

	ದಕ್ಷಿಣ ಅಮೆರಿಕಾದಲ್ಲಿ ದಕ್ಷಿಣ ಪೆಸಿಫಿಕ್ ಸಾಗರದ ತೀರದ ವಾಲ್ಪರೈಸೊ ಬಂದರಿನಲ್ಲಿ ಹಡಗಿನ ಭರ್ತಿಕಟ್ಟೆಯಲ್ಲಿ ಜಾಗವನ್ನು ಹೆಚ್ಚಿಸಲು 1912ರಲ್ಲಿ ಒಂದು ಅಲೆತಡೆಯನ್ನು ಕಟ್ಟಿ 1930ರ ತನಕವೂ ಬಂದರಿನಲ್ಲಿ ಮೇಲ್ಪಾಡುಗಳನ್ನು ಮಾಡಿದರು. ಇಲ್ಲಿ 55 ಮೀ ಆಳದ ನೀರಿನಲ್ಲಿ 975ಮೀ ಉದ್ದದ ಒಂದು ಅಲೆತಡೆಯನ್ನು ಕಟ್ಟಬೇಕಾಯಿತು. ದಡದಿಂದ ಮರಳನ್ನು ಬಲಿಷ್ಠವಾದ ಹೂಳೆತ್ತುವ ಯಂತ್ರಗಳಿಂದ ತೆಗೆದು 305ಮೀ ಉದ್ದವೂ 46ಮೀ ಎತ್ತರವೂ ಆದ ಏರಿಯನ್ನು ಕಟ್ಟಿ ಅದರ ಮೇಲೆ ಭರ್ತಿಕಲ್ಲನ್ನು ತುಂಬಿ ಈ ತಳಪಾಯದ ಮೇಲೆ ಅಲೆತಡೆಯ ನಿರ್ಮಾಣವಾಯಿತು. ಒಂದು ಕಡೆ ಮೇಲು ಕಟ್ಟಡವನ್ನು ದೋಣಿಗಳ ಮೇಲೆ ಸ್ಥಳಕ್ಕೆ ಸಾಗಿಸಿದ ಹದಿಗೂಡುಗಳನ್ನು ಹೂತು ಅವುಗಳೊಳಕ್ಕೆ ಕಾಂಕ್ರೀಟ್ ತುಂಬಿ ಅದರ ಮೇಲೆ ಎತ್ತಿದರು. ಇತರ ಕಡೆಗಳಲ್ಲಿ ಕಲ್ಲಿನ ಗೋಡೆಗಳನ್ನು ಕಟ್ಟಿದ್ದಾರೆ.

	ಎರಡು ಅಥವಾ ಹೆಚ್ಚು ಅಲೆತಡೆಗಳುಳ್ಳ ಕೊಲ್ಲಿಯ ಬಂದರುಗಳು: ಆಳವಾದ ಕೊಲ್ಲಿಯ ಬಂದರುಗಳ ಸಮುದ್ರತೀರದಲ್ಲಿ ಕೊಲ್ಲಿಯ ಎರಡು ದಡಗಳಿಂದಲೂ ಪ್ರಾರಂಭಿಸಿ ಅಲೆತಡೆಗಳನ್ನು ಕೊಲ್ಲಿಗೆ ಅಡ್ಡವಾಗಿ ತೆಗೆದುಕೊಂಡು ಹೋಗಿ ಒಂದು ಕೊನೆಯಲ್ಲಿ ಹಡಗುಗಳಿಗೆ ಪ್ರವೇಶ ಮಾರ್ಗವನ್ನು ಕಲ್ಪಿಸಿರುತ್ತಾರೆ. ಈ ಪೈಕಿ ಒಂದು ಅಲೆತಡೆಯನ್ನು ಕೊಂಚ ಮುಂದಕ್ಕೆ ನೂಕಿ ಹಿಂದಿನದಕ್ಕಿಂತಲೂ ಆಚೆಗೆ ಚಾಚುವ ಹಾಗೆ ಮಾಡಿದರೆ ಹೆಚ್ಚು ರಕ್ಷಣೆ ದೊರಕುತ್ತದೆ. ಶ್ರೀಲಂಕಾದ ಕೊಲಂಬೊ ಕೃತಕ ಬಂದರಿನ ಅಲೆತಡೆಗಳು ಹಿಂದೂಮಹಾಸಾಗರದ ಪಶ್ವಿಮ ಮಾರುತಗಳನ್ನು ಎದುರಿಸಬೇಕಾಗುತ್ತದೆ. 128 ಮೀ ಉದ್ದವಾದ ಅಲೆತಡೆಯನ್ನು 1885ರಲ್ಲಿ ಕಟ್ಟಿದರು. ಆಮೇಲೆ 800 ಮೀ ಉದ್ದವಾದ ವಾಯುವ್ಯ ದಿಕ್ಕಿನ ಅಲೆತಡೆಯನ್ನು 1892ರಲ್ಲಿಯೂ 330 ಮೀ ಉದ್ದವಾದ ಈಶಾನ್ಯದ ಅಲೆತಡೆಯನ್ನು 1906ರಲ್ಲಿಯೂ ಕಟ್ಟಬೇಕಾಯಿತು. 1912ರಲ್ಲಿ ನೈಋತ್ಯದ ಅಲೆತಡೆಯನ್ನು 550 ಮೀಟರಿನಷ್ಟು ಉದ್ದವಾಗಿ ಮಾಡಿ ಬಂದರಿನ ಉತ್ತರ ಭಾಗವನ್ನು ನೈಋತ್ಯ ಮಾರುತಗಳ ಹೊಡೆತದಿಂದ ಕಾಪಾಡಿದ್ದಾರೆ. ಬಂದರಿನ ವಿಸ್ತೀರ್ಣ 260 ಹೆಕ್ಟೇರುಗಳು. ಇದರಲ್ಲಿ ಹೂಳು ತೆಗೆದು ನೀರಿನ ಆಳವನ್ನು 9 ಮೀನಿಂದ 11 ಮೀ ವರೆಗೆ ಕಟ್ಟಿದ್ದಾರೆ.

	ಪೋರ್ಟೆಸೇಡ್ ಬಂದರು ಸೂಯಸ್ ನಾಲೆಯ ಪ್ರವೇಶ ಮಾರ್ಗದಲ್ಲಿ ಅದರ ಪಶ್ಚಿಮಕ್ಕೆ ಈಜಿಪ್ಪಿನಲ್ಲಿದೆ. ಪ್ರವೇಶ ಮಾರ್ಗವನ್ನು ರಕ್ಷಿಸುವ ಎರಡು ಅಲೆತಡೆಗಳಿಂದ ಹೊರಗಿನ ಬಂದರನ್ನು ಮಾಡಿದ್ದಾರೆ. ಇಲ್ಲಿ ಒಂದು ತೇಲುವ ಹಡಗಿನ ಕಟ್ಟೆಯಿದೆ.

	ಕ್ಯಾಲಿಫೋರ್ನಿಯದ ಲಾಸ್ ಏಂಜಲೀಸ್ ನಗರದ ಹೊರಬಂದರು ಸ್ಯಾನ್ ಪೆಡ್ರೊ ಕೊಲ್ಲಿಯಲ್ಲಿದೆ. ಇಲ್ಲಿ ಮೊದಲು 350 ಮೀ ಉದ್ದದ ಒಂದೇ ಅಲೆತಡೆಯಿತ್ತು. ಈಚೆಗೆ ಇನ್ನೂ ಕೆಲವು ಅಲೆತಡೆಗಳನ್ನು ಕಟ್ಟಿ ಬಂದರಿಗೆ ರಕ್ಷಣೆ ಒದಗಿಸಿದ್ದಾರೆ. ಕೇವಲ ರಕ್ಷಣೆಗಾಗಿಯೇ ಅಲ್ಲದೆ ಈಚೆಗೆ ಹಡಗುಗಳ ಅಳತೆ ಹೆಚ್ಚಾಗಿರುವುದರಿಂದಲೂ ರೇವಿಗೆ ಬರುವ ದೊಡ್ಡ ಹಡಗುಗಳ ಸಂಖ್ಯೆ ಹೆಚ್ಚಿರುವುದರಿಂದಲೂ ಈ ಬಡಾವಣೆಗಳು ಅವಶ್ಯವಾಗುತ್ತವೆ. 1937ರಲ್ಲಿ ಮೊದಲನೆಯ ಅಲೆತಡೆಯ ಕೊನೆಯಿಂದ 670 ಮೀ ಅಗಲದ ಪ್ರವೇಶಮಾರ್ಗವನ್ನು ಬಿಟ್ಟು ಪೂರ್ವದ ಕಡೆ 3810ಮೀ ಉದ್ದದ ಅಲೆತಡೆಯನ್ನು ಸಮುದ್ರಮಧ್ಯದಲ್ಲಿ ಕಟ್ಟಿ ಅಮೇಲೆ ಅದರ ಉದ್ದವನ್ನು 1830 ಮೀ ನಷ್ಟು ಹೆಚ್ಚಿಸಿದರು. ಮತ್ತೆ 550 ಮೀ ಅಗಲದ ಪ್ರವೇಶಮಾರ್ಗವನ್ನು ಬಿಟ್ಟು ಪೂರ್ವದ ಕಡೆ 4070 ಮೀ ಉದ್ದದ ಅಲೆತಡೆಯನ್ನು ಕಟ್ಟಿದರು. ಈ ಬಂದರಿನ ವಿಸ್ತ್ರೀರ್ಣ 2428 ಹೆಕ್ಟೇರುಗಳು, ಪ್ರವೇಶಮಾರ್ಗಗಳಲ್ಲಿ ಹೂಳುಎತ್ತಿ 12 ಮೀನಿಂದ 14 ಮೀ ಆಳವಾಗಿ ಮಾಡಿದ್ದಾರೆ.

	3 ತೆರೆದ ಸಮುದ್ರತೀರಗಳ ಮೇಲೆ ಕೃತಕ ಬಂದರುಗಳು; ಕೆಲವು ಕಡೆ ನೈಸರ್ಗಿಕವಾದ ರಕ್ಷಣೆಯೇ ಇಲ್ಲದೆ ಇರುವ ಸ್ಥಳಗಳಲ್ಲಿಯೂ ಬಂದರುಗಳನ್ನು ಕಟ್ಟಬೇಕಾಗುತ್ತದೆ. ಅಂಥಕಡೆಗಳಲ್ಲಿ ಬಂದರಿನ ಸುತ್ತಲೂ ಅಲೆತಡೆ ಕಟ್ಟಿ ರಕ್ಷಣೆ ಒದಗಿಸಬೇಕಾಗುತ್ತದೆ. ಈ ಸಂವಿಧಾನ ಸಮುದ್ರದ ಅಲೆಗಳನ್ನು ಎದುರಿಸಿ ಒಳಗಡೆ ನೇರ ಶಾಂತವಾಗಿ ಇರುವಂತೆ ಮಾಡುತ್ತದೆ. ಈ ಅಲೆತಡೆಗಳನ್ನು ದಡದಿಂದಲೇ ಪ್ರಾರಂಭಿಸಬಹುದು. ಇಲ್ಲವೆ ಸಮುದ್ರದ ಪ್ರವಾಹಗಳಿಗೆ ಅಡ್ಡ ಬರದಂತೆ ದ್ವೀಪಗಳ ಹಾಗೆ ಕಟ್ಟಬಹುದು.

	ಅಲೆತಡೆಗಳ ಸ್ಥಳ ನಿರ್ಣಯ: ಅಲೆಗಳು ಕಟ್ಟಡದ ಮೇಲೆ ನೇರವಾಗಿ ಬಡಿದರೆ ಆಘಾತ ಮಿತಿ ಮೀರುತ್ತದೆ. ಆದರೆ ಓರೆಯಾಗಿ ಬಾಗಿದಾಗ ಕಟ್ಟಡದ ಮೇಲಿನ ಹೊಡೆತ ಕಡಿಮೆಯಾದರೂ ರೇವಿನ ಬಾಯಿಗೆ ಅಡ್ಡವಾಗಿ ಅಲೆಗಳು ಹರಿದು, ಸಮುದ್ರ ಕ್ಷುಬ್ದವಾಗಿದ್ದಾಗ ಹಡಗುಗಳು ಒಳಗೆ ಬರುವುದೇ ಕಷ್ಟವಾಗಬಹುದು. ಸಾಧ್ಯವಾದ ಕಡೆಗಳಲ್ಲೆಲ್ಲ ಕಾಪುಗೋಡೆಗಳನ್ನು ಯಾವ ದಿಕ್ಕಿನಲ್ಲಿ ಕಟ್ಟಿದರೆ ಅಲೆಗಳು ಬೇರೆ ದಿಶೆಗೆ ತಿರುಗಿ ರೇವಿನ ಹೊರಗಡೆಯ ತೀರಕ್ಕೆ ಬಡಿಯುವುವೋ ಆ ದಿಕ್ಕಿನಲ್ಲಿ ಕಟ್ಟಬೇಕು. ರೇವಿನ ಪ್ರವೇಶಮಾರ್ಗದಲ್ಲಿ ನೀರಿನೊಳಗೂ ಹೊರಗೂ ಇರುವ ಕಲ್ಲುಬಂಡೆಗಳು, ಮರಳ ದಿಣ್ಣೆಗಳು, ದ್ವೀಪಗಳು ಯಾವುವೂ ಇಲ್ಲದೆ ಸಮುದ್ರ ಅನಿರ್ಬಂದಿತವಾಗಿ ಒಳಗೆ ಬರುವ ಹಾಗಿರಬೇಕು. ಮಾರ್ಗ ಕಿರಿದಾಗಿದ್ದರೆ ದೊಡ್ಡ ಹಡಗುಗಳು ಒಳಕ್ಕೆ ಬರುವುದಕ್ಕೆ ಅಡ್ಡಿ ಆಗುತ್ತದೆ. ನದಿಗಳ ಅಳಿವೆಗಳಲ್ಲಿ ರೇವುಗಳಿರುವಾಗ ಅಲೆಗಳನ್ನು ಎಲ್ಲ ಕಾಲದಲ್ಲಿಯೂ ತಡೆಯುವುದು ಸಾಧ್ಯವಾಗಲಾರದು. ಅಂಥ ಕಡೆಗಳಲ್ಲಿ ಅಲೆಬಲೆಗಳನ್ನು ಕಟ್ಟಬೇಕಾಗುತ್ತದೆ. ಪ್ರವೇಶನಾಲೆಯ ಪಕ್ಕಗಳಲ್ಲಿ ಸಮುದ್ರದ ಕಡೆ ಮುಖವನ್ನು ತಿರುಗಿಸಿರುವ ಈ ಆಳವಾದಬಾಯಿಗಳು ಅಲೆಗಳನ್ನು ಹೀರುತ್ತವೆ. ಬಂದರಿನ ಸುತ್ತಲೂ ಲಂಬವಾದ ಗೋಡೆಗಳಿದ್ದರೆ ಅವು ಅಲೆಗಳನ್ನು ಪ್ರತಿಫಲಿಸಿ ಸಮುದ್ರದ ಮೇಲ್ಮೈಯನ್ನು ಒರಟಾಗಿ ಮಾಡುತ್ತವೆ. ಇಳಿಜಾರಾದ ಮುಖದ ಗೋಡೆಗಳನ್ನು ಕಟ್ಟುವುದೇ ಯುಕ್ತ. ಇಳಿಜಾರಾದ ಪಕ್ಕಗಳಿರುವ ಮಣ್ಣಿನ ಏರಿಯಲ್ಲಿ ಒರಟುಕಲ್ಲುಗಳನ್ನು ಒಳಗಡೆ ತುಂಬಿ ಮೇಲುಗಡೆ ಕಾಂಕ್ರೀಟಿನ ದಿಮ್ಮಿಗಳಿಂದ ಮುಚ್ಚುತ್ತಾರೆ. ಲಂಬವಾದ ಪಕ್ಕಗಳಿರುವ ಗೋಡೆಗಳನ್ನು ವರಸೆಯಾಗಿ ಇಟ್ಟು ಕಾಂಕ್ರೀಟಿನ ದಿಮ್ಮಿಗಳಿಂದ ಅಥವಾ ಸಾಲುಸಾಲಾಗಿ ಇಟ್ಟು ಕೇಸಾನುಗಳಿಂದ ಕಟ್ಟುತ್ತಾರೆ.

	ಇಂಗ್ಲೇಡಿನಲ್ಲಿ ಪ್ಲಿಮತ್ತಿನ ಬಂದರಿನಲ್ಲಿ ಎರಡು ಅಲೆತಡೆಯನ್ನು 1812ರಲ್ಲಿ ಯಂತ್ರಶಿಲ್ಪ ರೆನ್ನಿ ಕಟ್ಟಿದ. ಇದರ ಎತ್ತರವನ್ನೂ ಮೇಲಿನ ಅಗಲವನ್ನೂ ಈಚೆಗೆ ಹೆಚ್ಚಿಸಿದ್ದಾರೆ. ಈ ಅಲೆತಡೆ 1.6 ಕಿಮೀ ಉದ್ದವಾಗಿದೆ. ಇದೇ ನಮೂನೆಯ ಏರಿಯನ್ನು ಫ್ರಾನ್ಸಿನ ಮಾರ್ಸೇಲ್ಸಿನಲ್ಲಿ ಕಟ್ಟಿದ್ದಾರೆ. ಕಡಲ ಕಡೆಯ ಪಕ್ಕದಲ್ಲಿ ಕಾಂಕ್ರೀಟಿನ ದಿಮ್ಮಿಗಳನ್ನು ಪೇರಿಸಿ ಏರಿಯ ಮೇಲುಗಡೆ ಕಾಂಕ್ರೀಟಿನ ಗೋಡೆಯನ್ನು ಕಟ್ಟಿದ್ದಾರೆ. ಈ ಅಲೆತಡೆಯ ಉದ್ದ 5-6 ಕಿ ಮೀ ತಳದ ಅಗಲ 98 ಮೀ, ಸಮುದ್ರಮಟ್ಟದಲ್ಲಿ ಅಗಲ 23 ಮೀ.

	ಈಚೆಗೆ ಗೋಡೆಯ ಅಲೆತಡೆಗಳನ್ನು ಕಟ್ಟುವುದೇ ಹೆಚ್ಚಾಗಿದೆ. ಇಂಗ್ಲೇಡಿನಲ್ಲಿ ಡೋವರ್ ಬಂದರಿನಲ್ಲಿ ಲಂಬವಾದ ಗೋಡೆಯನ್ನು ನಯವಾದ ಕಲ್ಲಿನಿಂದ ಕಟ್ಟಿದ್ದಾರೆ. ಇಲ್ಲಿ ಒಳಭಾಗದಲ್ಲಿ ವ್ಯಾಪಾರದ ರೇವೂ ಹೊರಗಡೆ ಸೈನ್ಯದ ರೇವೂ ಇವೆ. ಹೊರಗಡೆ ಮೂರು ಕಡೆಗಳಲ್ಲಿಯೂ ಅಲೆತಡೆಗಳನ್ನು ಕಟ್ಟಿ ಒಳ ಆವರಣವನ್ನು ನಿರ್ಮಿಸಿದ್ದಾರೆ. ಈ ಸಂವಿಧಾನವನ್ನೇ ಈ ಶತಮಾನದ ಆದಿಯಲ್ಲಿ ಕಟ್ಟಿದ ಇಟಲಿಯ ನೇಪಲ್ಸ್ ಮತ್ತು ಜಿನೋವ ಬಂದರುಗಳಲ್ಲಿಯೂ ಬಳಸಿಕೊಂಡಿದ್ದಾರೆ. ನೇಪಲ್ಸಿನಲ್ಲಿ ಗೂಡುಗೂಡಾದ ಕಾಂಕ್ರೀಟಿನ ದಿಮ್ಮಿಗಳಿಂದ ವರಸೆಯಾಗಿ ಕಟ್ಟಿದ್ದಾರೆ. ಜಿನೋವದಲ್ಲಿ ನೈಋತ್ಯದಿಕ್ಕಿನ ಮಾರುತಗಳಿಂದ ರಕ್ಷಣೆಬೇಕು. ಇಲ್ಲಿ ಸಮುದ್ರತೀರಕ್ಕೆ ಸಮಾಂತರವಾಗಿ ಚಾಚಿದ 48 ಕಿಮೀ ಉದ್ದದ ಕಲ್ಲಿನ ಗೋಡೆಗಳನ್ನು ಬಡಾಯಿಸಬೇಕಾದಾಗ ಮೊದಲು ಕಾಂಕ್ರೀಟಿನ ಗೂಡುಗೂಡಾದ ದಿಮ್ಮಿಗಳನ್ನು ಬಳಸಿದರು. ಆದರೆ ದಿಮ್ಮಿಗಳ ನಡುವೆ ಹಾಕಿದ ಕಾಂಕ್ರೀಟು ಗಟ್ಟಿಯಾಗುವುದಕ್ಕೆ ಪ್ರಕ್ಷುಬ್ಧ ಸಮುದ್ರ ಅಡ್ಡಿ ಮಾಡಿತು. ಅದಕ್ಕಾಗಿ ಬಹಳ ದೊಡ್ಡ ಗಾತ್ರದ ಕಲ್ಲಿನ ದಿಮ್ಮಿಗಳಿಂದ ಬಡಾವಣೆ ಕಟ್ಟಿದರು. ಈ ನಮೂನೆಯನ್ನು ಇನ್ನೂ ಅನೇಕ ಬಂದರುಗಳಲ್ಲಿ ಬಳಸಲಾಗಿದೆ.

	ಸಮುದ್ರದ ಪ್ರವಾಹಗಳು: ಸಮುದ್ರದ ದಡದಲ್ಲಿರುವ ಮರಳು; ಇಲ್ಲವೆ ಮೆಕ್ಕಲು ಮಣ್ಣಿನ ಮೇಲೆ ಈ ಪ್ರವಾಹಗಳ ಪ್ರಭಾವವನ್ನು ತಿಳಿಯಬೇಕು; ಇಲ್ಲದೆ ಹೋದರೆ ಅದರ ಮೇಲೆ ಕಟ್ಟಿ ಕಟ್ಟಡಗಳು ಪ್ರವಾಹಕ್ಕೆ ಅಡ್ಡ ಬಂದು ಅನಾಹುತವಾಗಬಹುದು. 1877ರಲ್ಲಿ ಪ್ರಾರಂಭಿಸಿದ ಮದರಾಸಿನ ಕೃತಕ ಬಂದರಿನಲ್ಲಿ ಸಮುದ್ರತೀರಕ್ಕೆ ಲಂಬಕೋನವಾಗಿ ಎರಡು ಅಲೆತಡೆಗಳನ್ನು 915ಮೀ ಉದ್ದವಾಗಿ ಕಟ್ಟಿ ಪೂರ್ವ ಸಮುದ್ರದ ಕಡೆಗೆ ಹೊರತು ಉಳಿದ ಕಡೆಗಳಲ್ಲಿ ಆವರಣಗಳನ್ನು ಕಲ್ಪಸಿದರು. ಸಮುದ್ರದ ಕಡೆ ಕೊಂಚ ವಾಲಿದ ಬಾಹುಗಳಲ್ಲಿ 157 ಮೀ ಅಗಲವಾದ ಪ್ರವೇಶಮಾರ್ಗವನ್ನು ಬಿಟ್ಟರು. ಈ ಪ್ರವೇಶಮಾರ್ಗದಲ್ಲಿ ಸಮುದ್ರ ಕ್ಷುಬ್ಧವಾದಾಗ ಹಡುಗುಗಳು ಬರುವುದಕ್ಕೆ ಆಗುತ್ತಿರಲಿಲ್ಲ. ಇದು ನೈಋತ್ಯ ಮತ್ತು ಈಶಾನ್ಯ ಮಾರುತಗಳ ಕಾಲದಲ್ಲಿ ಅಲೆಗಳ ಹೊಡೆತಕ್ಕೆ ಸಿಕ್ಕಿತ್ತು. ದಕ್ಷಿಣದ ಅಲೆತಡೆಯ ಹಿಂದುಗಡೆ ಒಂದು ಮರಳುದಿಣ್ಣೆ ಬೆಳೆದು ಬಂದರಿನ ಉತ್ತರಕ್ಕೆ ಸಮುದ್ರ ತೀರದಲ್ಲಿ ಮೂರು ನಾಲ್ಕು ಕಿಮೀಗಳ ದೂರ ನೆಲಕೊರೆದು ಹೋಯಿತು. ಬಂದರಿನ ಕೆಲಸ ಪೂರ್ತಿಯಾದ ಬಳಿಕ ಪೂರ್ವಮುಖದ ಪ್ರವೇಶಮಾರ್ಗದಿಂದ ನಿಂತ ನೀರಿನಲ್ಲಿ ಮರಳು ತುಂಬಿ ಅದರ ಮಟ್ಟ ವರ್ಷಕ್ಕೆ 30 ಸೆಂಮೀನಂತೆ ಮೇಲಕ್ಕೆ ಏರಿತು. ಅದಕ್ಕಾಗಿ 1921ರಲ್ಲಿ ಈ ಪ್ರವೇಶಮಾರ್ಗವನ್ನು ಮುಚ್ಚಿ ಉತ್ತರ ದಿಕ್ಕಿನ ಅಲೆತಡೆಯಲ್ಲಿ ಹೊಸ ಪ್ರವೇಶಮಾರ್ಗ ಕಲ್ಪಿಸಿದರು. ಈಗ ಹಡಗುಗಳು ಎಲ್ಲ ಕಾಲದಲ್ಲಿಯೂ ಒಳಕ್ಕೆ ಬರಬಹುದು.

	ವಿಶಾಖಪಟ್ಟಣದ ಬಂದರನ್ನು 1928ರಿಂದ 1933ರ ಅವಧಿಯಲ್ಲಿ ಕಟ್ಟಿದಾಗ ಹೀಗೆ ಮರಳು ಒಳಕ್ಕೆ ಬರುವುದನ್ನು ನಿಲ್ಲಿಸಬೇಕಾಯಿತು. ಈ ನೈಸರ್ಗಿಕ ಬಂದರಿನಲ್ಲಿ ಒಂದು ಕಡಲ ಚಾಚೂ ಕಿರಿದಾದ ಪ್ರವೇಶಮಾರ್ಗವಿರುವ ಲ್ಯಾಗೂನಿನ ನಿಂತ ನೀರೂ ಇವೆ. ತುಂಬುವ ಮರಳಿನ ದಾರಿಯನ್ನು ತಿರುಗಿಸುವುದಕ್ಕಾಗಿ ಸಾಲಿಗೆ ಎರಡು ಹಳೆಯ ಹಡಗುಗಳಿಗೆ ಕಲ್ಲನ್ನು ತುಂಬಿ ಮುಳುಗಿಸಿ ಸುತ್ತಕಲ್ಲಿನ ಏರಿ ಕಟ್ಟಿ ಅಲೆತಡೆ ಮಾಡಿದ ಮೇಲೆ ಪರಿಸ್ಥಿತಿ ಹದಕ್ಕೆ ಬಂದಿತು. ಪ್ರವೇಶಮಾರ್ಗದಲ್ಲಿ ಹೂಳು ತೆಗೆದು 9.1 ಮೀ ಆಳದ ನಾಲೆ ತೋಡಿ ಉತ್ತರದಿಕ್ಕಿನಲ್ಲಿ ಭರ್ತಿಕಲ್ಲಿನ ಜೆಟ್ಟಿ ಕಟ್ಟಿ ಬಂದರಿನೊಳಕ್ಕೆ ಬರುವ ನಾಲೆ ದಕ್ಷಿಣದ ಕಡೆ 305 ಮೀ ಉದ್ದದ ಭರ್ತಿ ಕಲ್ಲಿನ ಅಲೆತಡೆ ಕಟ್ಟಿ ಸುರಕ್ಷಿತವಾಗಿ ಮಾಡಿದ್ದಾರೆ.

	ಭೂಮಧ್ಯಸಮುದ್ರ ಮೊದಲಾದ ಅಲೆಗಳೆ ಇಲ್ಲದೆ ಇರುವ ಸಮುದ್ರದಲ್ಲಿ ತೀರದಿಂದ ಸ್ವಲ್ಪ ದೂರದಲ್ಲಿ ಅದಕ್ಕೆ ಸಮಾಂತರವಾಗಿ ಅಲೆತಡೆಗಳನ್ನು ಕಟ್ಟಿ ಅದರಲ್ಲಿ ಅಲ್ಲಲ್ಲಿ ಸಂದುಗಳನ್ನು ಬಿಡುತ್ತಾರೆ. ಈ ಅಲೆರಡೆಗಳ ರಕ್ಷಣೆಯಲ್ಲಿ ಬಂದರಿಂದ ಒಳಗಿನ ಕಾಮಗಾರಿಗಳನ್ನು ಕಟ್ಟುತ್ತಾರೆ.

	ಶಿಕಾಗೊ, ಟೊರಂಟೊ ಮೊದಲಾದ ಅಮೆರಿಕದ ಮಹಾ ಸರೋವರದ ದಡಗಳ ಮೇಲಿನ ನೆಲದಿಂದ ಸುತ್ತುವರಿದ ನೈಸರ್ಗಿಕ ಬಂದರುಗಳಲ್ಲಿಯೂ ಸಮುದ್ರತೀರಕ್ಕೆ ಸಮಾಂತರವಾದ ಅಲೆತಡೆಗಳನ್ನು ಕಟ್ಟುತ್ತಾರೆ.
(ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ